Virat Kohli Century: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ 5 ನೇ ಪಂದ್ಯದಲ್ಲಿ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಶತಕ ಬಾರಿಸಿದ್ದಾರೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ 82 ನೇ ಶತಕವಾಗಿದೆ. ಅದೇ ಸಮಯದಲ್ಲಿ, ಪಾಕಿಸ್ತಾನ ವಿರುದ್ಧ ಅವರು ನಾಲ್ಕನೇ ಬಾರಿಗೆ 100 ರನ್ಗಳ ಗಡಿ ದಾಟಿದ ಸಾಧನೆ ಮಾಡಿದ್ದಾರೆ.
Virat Kohli
ರನ್ ಬರ.. ಕಳಪೆ ಫಾರ್ಮ್.. ನಿವೃತ್ತಿ ಘೋಷಿಸಿಸಿ… ಕಳೆದ ಕೆಲವು ದಿನಗಳಿಂದ ಕೊಹ್ಲಿ ವಿಚಾರದಲ್ಲಿ ಹಲವು ಕ್ರಿಕೆಟ್ ಪಂಡಿತರು ಹೇಳುತ್ತಿದ್ದ ಮಾತಿದು. ಆದರೆ ಇಂದು ನಡೆದ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಗೆಲುವಿನ ಶತಕ ಬಾರಿಸಿದ ವಿರಾಟ್ ಕೊಹ್ಲಿ, ಈ ಒಂದು ಶತಕದೊಂದಿಗೆ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೆ ಆರಂಭದಿಂದಲೂ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು ಜಯದ ದಡ ಮುಡಿಸಿದ್ದಾರೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ಸುತ್ತಿಗೆ ಭಾಗಶಃ ಅರ್ಹತೆ ಪಡೆದರೆ, ಇತ್ತ ಪಾಕಿಸ್ತಾನ ತಂಡ ಲೀಗ್ ಹಂತದಲ್ಲೇ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳುವ ಆತಂಕದಲ್ಲಿದೆ.
82ನೇ ಶತಕ ಬಾರಿಸಿದ ಕೊಹ್ಲಿ

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಯಾವಾಗಲೂ ರೋಮಾಂಚಕಾರಿಯಾಗಿರುತ್ತದೆ. ಹೀಗಾಗಿ ಈ ಪಂದ್ಯದಲ್ಲಿಯೂ ಕೂಡ ಭಾರತಕ್ಕೆ ಆರಂಭದಲ್ಲಿ ರನ್ ಗಳಿಸುವುದು ಸವಾಲಾಗಿತ್ತು. ಏಕೆಂದರೆ ಆರಂಭದಲ್ಲಿಯೇ ರೋಹಿತ್ರನ್ನು ಔಟ್ ಮಾಡುವ ಮೂಲಕ ಪಾಕಿಸ್ತಾನ ಬೌಲರ್ಗಳು ಉತ್ತಮ ಹಿಡಿತ ಸಾಧಿಸಿದರು. ಅಂತಹ ಪರಿಸ್ಥಿತಿಯಲ್ಲಿ ತಂಡದ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ವಿರಾಟ್ ಕೊಹ್ಲಿ ಶತಕದ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 111 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ ಅಜೇಯ 100 ರನ್ ಕಲೆಹಾಕಿದರು.
16 ವರ್ಷಗಳ ಕಾಯುವಿಕೆ ಅಂತ್ಯ
ವಿರಾಟ್ ಕೊಹ್ಲಿ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಆಡಿದ್ದು 2009 ರಲ್ಲಿ. ಆದರೆ ಈ ಟೂರ್ನಿಯಲ್ಲಿ ವಿರಾಟ್ ಶತಕ ಬಾರಿಸಿದ್ದು ಇದೇ ಮೊದಲು. ಅಂದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಶತಕ ಬಾರಿಸಲು ಕೊಹ್ಲಿ 16 ವರ್ಷ ಕಾಯಬೇಕಾಯಿತು. ಅದೇ ಸಮಯದಲ್ಲಿ, 2023 ರ ಏಕದಿನ ವಿಶ್ವಕಪ್ ನಂತರ ಏಕದಿನದಲ್ಲಿ ಕೊಹ್ಲಿ ಶತಕ ಗಳಿಸಿದ್ದು ಇದೇ ಮೊದಲು. ಇದಲ್ಲದೆ, ಕೊಹ್ಲಿ 531 ದಿನಗಳ ನಂತರ ವಿದೇಶಿ ನೆಲದಲ್ಲಿ ಏಕದಿನ ಶತಕ ಬಾರಿಸಿದ ಸಾಧನೆಯನ್ನು ಮಾಡಿದ್ದಾರೆ.
ಕೊಹ್ಲಿ ಇನ್ನಿಂಗ್ಸ್ನ ವಿಶೇಷತೆ
ಐಸಿಸಿ ಏಕದಿನ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ನಾಲ್ಕನೇ ಬಾರಿಗೆ 50+ ರನ್ ಗಳಿಸಿದ್ದಾರೆ, ಇದು ಒಂದು ದಾಖಲೆಯಾಗಿದೆ. ವಿರಾಟ್ ಹೊರತುಪಡಿಸಿ, ವಿವ್ ರಿಚರ್ಡ್ಸ್ ಮತ್ತು ಸಚಿನ್ ತೆಂಡೂಲ್ಕರ್ ಪಾಕಿಸ್ತಾನ ವಿರುದ್ಧ ತಲಾ 3 ಬಾರಿ 50+ ರನ್ ಗಳಿಸಿದ್ದರು. ಇದಲ್ಲದೆ, ಇದು ಐಸಿಸಿ ಏಕದಿನ ಪಂದ್ಯಾವಳಿಯಲ್ಲಿ ಅವರ 23 ನೇ 50+ ಸ್ಕೋರ್ ಆಗಿದೆ. ಅವರನ್ನು ಹೊರತುಪಡಿಸಿ, ಸಚಿನ್ ತೆಂಡೂಲ್ಕರ್ ಮಾತ್ರ ಐಸಿಸಿ ಏಕದಿನ ಪಂದ್ಯಗಳಲ್ಲಿ ಇಷ್ಟೊಂದು ಬಾರಿ 50+ ರನ್ ಗಳಿಸಲು ಸಾಧ್ಯವಾಗಿದೆ.