IND vs PAK – Champions Trophy 2025: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಾಬರ್ ಅಝಂ ಅವರನ್ನು ಔಟ್ ಮಾಡಿ ಭಾರತಕ್ಕೆ ಮಹತ್ವದ ಯಶಸ್ಸು ತಂದುಕೊಟ್ಟರು. ಬಾಬರ್ 23 ರನ್ ಗಳಿಸಿ ಔಟಾದರು. ಪಾಂಡ್ಯರ ಈ ವಿಕೆಟ್ ಪಡೆಯುವಿಕೆ ಮತ್ತು ನಂತರದ ಆಚರಣೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ತಂಡದ ಗೆಲುವಿಗೆ ಬಾಬರ್ ಅವರ ಉತ್ತಮ ಪ್ರದರ್ಶನ ಅತ್ಯಂತ ಅಗತ್ಯವಾಗಿತ್ತು ಆದರೆ ಅದು ಸಾಧ್ಯವಾಗಲಿಲ್ಲ.
IND vs PAK 2025
ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಂ ಮತ್ತೊಮ್ಮೆ ಟೀಮ್ ಇಂಡಿಯಾ ವಿರುದ್ಧ ವಿಫಲರಾಗಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಪಂದ್ಯ ಆತಿಥೇಯ ಪಾಕಿಸ್ತಾನ ತಂಡಕ್ಕೆ ಬಹಳ ಮುಖ್ಯವಾಗಿದೆ. ಟೂರ್ನಿಯಲ್ಲಿ ಉಳಿಯಬೇಕಾದರೆ, ಪಾಕ್ ತಂಡ ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಅಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ಬಾಬರ್ ಆಝಂ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಿತ್ತು. ಆದರೆ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಭರವಸೆಯನ್ನು ಹುಸಿಗೊಳಿಸಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾಗೆ ಮೊದಲ ಯಶಸ್ಸನ್ನು ತಂದುಕೊಟ್ಟ ಹಾರ್ದಿಕ್ ಪಾಂಡ್ಯ, ಬಾಬರ್ ವಿಕೆಟ್ ಉರುಳಿಸಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದರು.
ಹಾರ್ದಿಕ್ಗೆ ಬಲಿಯಾದ ಬಾಬರ್
IND vs PAK : ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನ ತಂಡಕ್ಕೆ ಮೊದಲ ವಿಕೆಟ್ಗೆ 41 ರನ್ಗಳ ಜೊತೆಯಾಟ ಸಿಕ್ಕಿತು. ಮಾಜಿ ನಾಯಕ ಬಾಬರ್ ಆಝಂ ಬೌಂಡರಿಗಳನ್ನು ಬಾರಿಸುವ ಮೂಲಕ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ಇನ್ನಿಂಗ್ಸ್‌ನ 9 ನೇ ಓವರ್‌ನಲ್ಲಿ ದಾಳಿಗಿಳಿದ ಹಾರ್ದಿಕ್ ಪಾಂಡ್ಯ ಬಾಬರ್ ಆಝಂ ಅವರನ್ನು ಬಲಿಪಶುವನ್ನಾಗಿ ಮಾಡಿದರು. ಈ ಓವರ್‌ನ ಎರಡನೇ ಎಸೆತವನ್ನು ಡ್ರೈವ್ ಮಾಡಲು ಯತ್ನಿಸಿದ ಬಾಬರ್, ವಿಕೆಟ್ ಕೀಪರ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಇದಾದ ನಂತರ ಹಾರ್ದಿಕ್ ಪಾಂಡ್ಯ ತಮ್ಮದೇ ಆದ ಶೈಲಿಯಲ್ಲಿ ವಿಕೆಟ್ ಪಡೆದ ಸಂಭ್ರಮಾಚರಣೆ ಮಾಡಿದರು. ಮೊದಲು ಬಾಬರ್ಗೆ ವಿದಾಯ ಹೇಳಿದ ಹಾರ್ದಿಕ್ ಆನಂತರ ಮೈದಾನದಿಂದ ಹೊರಗೆ ಹೋಗಲು ಹೇಳಿದರು. ಪಾಂಡ್ಯ ಅವರ ಈ ಸಂಭ್ರಮಾಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಬಾಬರ್ ಆಝಂ 26 ಎಸೆತಗಳಲ್ಲಿ 88.46 ಸ್ಟ್ರೈಕ್ ರೇಟ್‌ನಲ್ಲಿ 5 ಬೌಂಡರಿಗಳನ್ನು ಒಳಗೊಂಡಂತೆ 23 ರನ್ ಗಳಿಸಿದರು. ಆದರೆ ಈ ಉತ್ತಮ ಆರಂಭದ ಲಾಭವನ್ನು ಪಡೆಯಲು ಬಾಬರ್ಗೆ ಸಾಧ್ಯವಾಗಲಿಲ್ಲ. ಹಾರ್ದಿಕ್ ಎಸೆದ 9ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆದರೆ ಪಾಂಡ್ಯ ಮುಂದಿನ ಎಸೆತದಲ್ಲೇ ಬಾಬರ್ ವಿಕೆಟ್ ಪಡೆದು ಸೇಡು ತೀರಿಸಿಕೊಂಡರು.
ಪಾಕ್ ವಿರುದ್ಧ ಪಾಂಡ್ಯ ಅದ್ಭುತ ಪ್ರದರ್ಶನ
ಐಸಿಸಿ ಸೀಮಿತ ಓವರ್‌ಗಳ ಪಂದ್ಯಾವಳಿಗಳಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಹಾರ್ದಿಕ್ ಪಾಂಡ್ಯ. ಅವರು ಪಾಕಿಸ್ತಾನ ತಂಡದ ವಿರುದ್ಧ ಇದುವರೆಗೆ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದೇ ಸಮಯದಲ್ಲಿ, ಆಶಿಶ್ ನೆಹ್ರಾ ಐಸಿಸಿಯ ಸೀಮಿತ ಓವರ್‌ಗಳ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳನ್ನು ಪಡೆದಿದ್ದರು. ಇಷ್ಟೇ ಅಲ್ಲ, ಪಾಕಿಸ್ತಾನ (IND vs PAK) ವಿರುದ್ಧದ ಐಸಿಸಿ ಈವೆಂಟ್‌ನ ಪ್ರತಿ ಏಕದಿನ ಪಂದ್ಯದಲ್ಲೂ ಪಾಂಡ್ಯ ಕನಿಷ್ಠ ಒಂದು ವಿಕೆಟ್ ಪಡೆದಿದ್ದಾರೆ, ಇದು ಅವರ ಸ್ಥಿರತೆಯನ್ನು ತೋರಿಸುತ್ತದೆ.